ಡಬ್ಲ್ಯೂಪಿಎಲ್-2026 ಆವೃತ್ತಿಯ 13ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿ.

ಟಾ-ಟಾ ಡಬ್ಲ್ಯೂಪಿ ಎಲ್-2026 ಆವೃತ್ತಿಯ 13 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ಹಣಾಹಣಿಯಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು ನಿಗಧಿತ 20 ಓವರ್ ಗಳಲ್ಲಿ 5 ವಿಕೇಟ್ ಗಳನ್ನು ಕಳೆದುಕೊಂಡು 154 ರನ್ ಗಳನ್ನು ಗಳಿಸಿತು. ಆರಂಭಿಕರಾದ ಹೇಲಿ ಮ್ಯಾಥೂಸ್ ಮತ್ತು ಸಜನಾ ರವರ ಜೋಡಿಯು ಅಷ್ಟೇನೂ ತೃಪ್ತಿಕರವಾದ ಆರಂಭವನ್ನು ಪಡೆಯಲಿಲ್ಲ. ಡೆಲ್ಲಿ ತಂಡದ ವೇಗದ ಬೌಲರ್ ಗಳಾದ ನಂದಿನಿ ಶರ್ಮಾ ಮತ್ತು ಮಾರಿಜಾನ್ ಕಾಪ್ ರವರು ಅತ್ಯಂತ ಕರಾರುವಾಕ್  ಬೌಲಿಂಗ್ ದಾಳಿಯನ್ನು ನಡೆಸಿ ಎದುರಾಳಿ ತಂಡದ ಬ್ಯಾಟರ್ ಗಳನ್ನು ಕಟ್ಟಿಹಾಕಿದರು. ಇದರಿಂದಾಗಿ ಮುಂಬೈ ಇಂಡಿಯನ್ಸ್ ತಂಡವು ಪವರ್ ಪ್ಲೇ ನ ಮುಕ್ತಾಯಕ್ಕೆ 6 ಓವರ್ ಗಳಲ್ಲಿ 23 ರನ್ ಗಳನ್ನು ಮಾತ್ರ ಗಳಿಸಿತ್ತು. ಹಾಗೂ 2 ವಿಕೇಟ್ ಗಳನ್ನು ಕಳೆದುಕೊಂಡಿತ್ತು.

ನಂತರ ಬ್ಯಾಟಿಂಗ್ ಗೆ ಇಳಿದ ಅನುಭವಿ ಬ್ಯಾಟರ್ ಗಳಾದ ನ್ಯಾಟ್ ಸೀವರ್ ಬ್ರಂಟ್ ಹಾಗೂ ನಾಯಕಿ ಹರ್ಮನ್ ಪ್ರೀತ್ ಕೌರ್ ರವರು ನಿಧಾನವಾಗಿ ರನ್ ರೇಟ್ ನ್ನು ಹೆಚ್ಚಿಸಲು ಪ್ರಾರಂಭಿಸಿದರು. ಇವರಿಬ್ಬರು ಉತ್ತಮ ಜೊತೆಯಾಟವನ್ನು ಆಡಿದರು. ನಂತರ ನಾಯಕಿ ಹರ್ಮನ್ ಪ್ರೀತ್ ಕೌರ್ ರವರು 41 ರನ್ ಗಳಿಸಿ ಔಟ್ ಆದರು ಅಂತಿಮವಾಗಿ ಅನುಭವಿ ಆಟಗಾರ್ತಿ ನ್ಯಾಟ್ ಸೀವರ್ ಬ್ರಂಟ್ ರವರ ಸಮಯೋಚಿತ ಆಟದ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡವು ನಿಗಧಿತ 20 ಓವರ್ ಗಳಲ್ಲಿ 154 ರನ್ ಗಳನ್ನು ಗಳಿಸಿತು.

 

ಡೆಲ್ಲಿ ಆರಂಭಿಕರ ಆರ್ಭಟ

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಆಟಗಾರ್ತಿ ಯರಾದ ಶೆಫಾಲಿ ವರ್ಮಾ ಮತ್ತು ಲೀಸಾ ಲೇ ರವರು ಪವರ್ ಪ್ಲೇ ನಲ್ಲಿ ಪವರ್ ಪ್ಯಾಕ್ ಪರ್ಫಾರ್ಮೆನ್ಸ್ ನ್ನು ನೀಡಿದರು. ಇವರಿಬ್ಬರ ಆರ್ಭಟದಿಂದ ಡೆಲ್ಲಿ ತಂಡವು ಪವರ್ ಪ್ಲೇ ನಲ್ಲಿ 57 ರನ್ ಗಳನ್ನು ಗಳಿಸಿತ್ತು ಇವುಗಳಲ್ಲಿ 52 ರನ್ ಗಳು ಬೌಂಡರಿಗಳಿಂದ ಬಂದಿದ್ದವು. ಇದಾದ ನಂತರ ಶೆಫಾಲಿ ವರ್ಮಾ ಬೇಡವಾದ ಹೊಡೆತಕ್ಕೆ ಪ್ರಯತ್ನ ಪಟ್ಟು ಕ್ಲೀನ್ ಬೌಲ್ಡ್ ಆದರೆ, ಅನ್ ಲಕ್ಕಿ ಲೋರಾ ಓಲ್ಫಾಟ್ ರವರು ರನ್ ಔಟ್ ಆದರು. ನಂತರ ಬಂದ ಜೆಮೀಮಾ ರೋಡ್ರಿಗ್ಸ್ ರವರ ಮಿಂಚಿನ ಆಟದ ಮುಂದೆ ಮುಂಬೈ ತಂಡವು ಮಂಡಿಯೂರಿ ಸೋಲನ್ನೊಪ್ಪಿಕೊಂಡಿತು. ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಗೆಲುವಿನ ನಗೆ ಬೀರಿತು.